ಚೇರ-
ದಕ್ಷಿಣ ಭಾರತದ ಅತ್ಯಂತ ನೈಋತ್ಯ ಭಾಗದಲ್ಲಿದ್ದ ರಾಜ್ಯವನ್ನಾಳುತ್ತಿದ್ದ ರಾಜವಂಶ. ಅವರ ನಾಡಿನಲ್ಲಿದ್ದ ತೊಂಡಿ, ಮುಶಿರಿಯ ಮುಂತಾದ ಬಂದರುಗಳು ಮೂಲಕ ಪ್ರಾಚೀನಕಾಲದಲ್ಲಿ ಹಿನ್ನಾಡಿನ ಅಮೂಲ್ಯ ಪದಾರ್ಥಗಳಾದ ಮೆಣಸು, ದಂತ, ಗಂಧದ ಮರ ಮುಂತಾದ ಅಮೂಲ್ಯ ಸರಕುಗಳು ವಿದೇಶಗಳಿಗೆ ರಫ್ತಾಗುತ್ತಿದ್ದುವು. ಇತರ ಕಡೆಗಳಲ್ಲಿ ದುರ್ಲಭವಾಗಿದ್ದ ಸಾಂಬಾರ ಪದಾರ್ಥಗಳು ಮತ್ತು ಅರಣ್ಯೋತ್ಪನ್ನಗಳು ಈ ನಾಡಿನಲ್ಲಿ ಸಮೃದ್ಧವಾಗಿದ್ದುವು. ಪಶ್ಚಿಮದ ಬಂದರಾಗಿದ್ದ ತೊಂಡಿಯಿಂದಲೂ ಒಳನಾಡಿನ ಪಟ್ಟಣವಾಗಿದ್ದ ಕರುವೂರ ಅಥವಾ ವಂಜಿಯಿಂದಲೂ ರಾಜ್ಯವಾಳುತ್ತಿದ್ದರು.

	ಚೇರ ಶದ್ಧದ ಅರ್ಥವೇನೆಂಬುದು ಸ್ಪಷ್ಟವಾಗಿಲ್ಲ. ಪೆರಿಪ್ಲಸ್‍ನಲ್ಲಿ ಹೇಳಲಾಗಿರುವ ಸೆರೆಬೊತ್ರ ಎಂಬುದೂ ಅಶೋಕನ ಕೇರಲಪುತ್ರ ಎಂಬುದೂ ಇವರನ್ನು ಕುರಿತ ಉಲ್ಲೇಖಗಳು. ಪಾಂಡ್ಯರು ತಮ್ಮದು ಚಂದ್ರವಂಶವೆಂದೂ ಚೋಳರು ತಮ್ಮನ್ನು ಸೂರ್ಯವಂಶದವರೆಂದೂ ಕರೆದುಕೊಂಡಿದ್ದರಿಂದ ಚೇರರು ತಾವು ಅಗ್ನಿವಂಶಜರೆಂದು ಹೇಳಿಕೊಂಡರೆಂದು ಕಾಣುತ್ತದೆ. ಚೇರಲ, ಇರುಂಪೊರೈ. ಕೋದೈ-ಇವು ಬೇರೆಬೇರೆ ರಾಜಧಾನಿಗಳಿಂದ ಆಳುತ್ತಿದ್ದ ಚೇರವಂಶದ ವಿಭಿನ್ನ ಶಾಖೆಗಳು ಇಮಯವರಂಬನ್ ನೆಡುಂಚೇರಲ್ ಆದನ್, ಸೆಂಗುಟ್ಟುವನ್ ಮೊದಲಾದವರು ಮೊದಲ ಶಾಖೆಗೆ ಸೇರಿದವರು. ಪೆರುಂಚೇರಲ್ ಮತ್ತು ಇಳಂಚೇರಲ್ ಇರುಂಪೊರೈ, ಕನೈಕ್ಕಲ್ ಇರುಂಪೊರೈ ಮೊದಲಾದವರು ಎರಡನೆಯ ಶಾಖೆಗೆ ಸೇರಿದವರು. ಕೊಕ್ಕೋದೈ ಮಾರ್ಬನ್, ಮುಕ್ಕೋದೈ ಮುಂತಾದವರು ಮೂರನೆಯ ಶಾಖೆಗೆ ಸೇರಿದವರು. ಅವರು ಸಂಗಮ್ ಯುಗದಲ್ಲಿ ಆಳುತ್ತಿದ್ದರು. ಅವರ ಉಚ್ಛಾಯ ಕಾಲದಲ್ಲಿ ಕೊಂಗುನಾಡು ಅವರ ಮೇರೆಗೆ ಒಳಪಟ್ಟಿತ್ತು; ಆದ್ದರಿಂದ ತಗಡೂರಿನ ಅಡಿಗೈಮಾನರು ಅವರ ಸಾಮಾಂತರಾಗಿದ್ದರು.

	ಚೇರರ ಇತಿಹಾಸವನ್ನು ಕ್ರಿ.ಪೂ. 3ನೆಯ ಶತಮಾನಕ್ಕೂ ಹಿಂದಿನಿಂದ ಗುರುತಿಸಬಹುದು. ಹಿಂದೆ ಹೇಳಿದಂತೆ ಅಶೋಕನ ಶಾಸನಗಳಲ್ಲಿ ಇವರ ಉಲ್ಲೇಖವಿದೆ. ಸಂಗಮ್ ಯುಗದಲ್ಲೂ ಇವರು ಪ್ರವರ್ಧಮಾನರಾಗಿದ್ದರು. ಪದಿ¾ುಪ್ಪಾಟ್ಟು ಗ್ರಂಥದಲ್ಲಿ ಇವರ ಪ್ರಶಂಸೆಯಿದೆ. ಅವರಲ್ಲಿ ಅತ್ಯಂತ ಪ್ರಸಿದ್ಧನಾದ ಸೆಂಗುಟ್ಟುವನ್ ಸಿಂಹಳದ 1ನೆಯ ಗಜಬಾಹುವಿನ (ಕ್ರಿ.ಶ. 2ನೆಯ ಉತ್ತರಭಾಗ) ಸಮಕಾಲೀನನಾಗಿದ್ದ. ಇವರ ರಾಜ್ಯ ಕಳಭರ ಅಧಿಪತ್ಯಕ್ಕೆ ಒಳಪಟ್ಟಾಗ ತಮಿಳುನಾಡಿನ ಇತಿಹಾಸದಲ್ಲಿ ಅವರ ಪ್ರಾಮುಖ್ಯ ತಗ್ಗಿತು. ಅನಂತರ ಅವರು ಪಾಂಡ್ಯರಿಗೆ ಇಲ್ಲವೇ ಚೋಳರಿಗೆ ಅಧೀನರಾಗಿ ಆಳಿದರು. ಮುಂದೆ ಚೇರರ ವಂಶದ ಶಾಖೆಯೊಂದರ ಅರಸನಾದ ಆಯರು ದಕ್ಷಿಣ ಕೇರಳದಲ್ಲಿ ಸಾಮಂತರಾಗಿ ಆಳಿದರು. ಗಿಮ್ಮ ಆಡಳಿತದ ಕೊನೆಯ ಹಂತದಲ್ಲಿ ಚೇರರಿಗೆ ಪೆರುಮಾಳರೆಂಬ ಹೆಸರಿತ್ತು. ಅವರಲ್ಲಿ ಅತ್ಯಂತ ಪ್ರಸಿದ್ಧನಾದ ದೊರೆ ಚೇರಮಾನ್ ಪೆರುಮಾಳ್ ನಾಯನಾರ್. ಈತ 9ನೆಯ ಶತಮಾನದ ಆದಿಕಾಲದಲ್ಲಿದ್ದ. ಇವನು ಕಾಲಾಧೀನನಾದ ಮೇಲೆ ಚೇರ ಪರಂಪರೆ ಕೊನೆಗೊಂಡಿತು. ಆಗ ಕೊಲ್ಲಮ್ ಶಕೆ ಆರಂಭವಾಯಿತು (ಸು. 825). ಕೇರಳದ ಮುಂದಿನ ರಾಜ ವಂಶಗಳು ಬಹುಶಃ ಪ್ರಾಚೀನ ಚೇರರ ವಂಶಜರೇ ಆಗಿದ್ದಿರಬೇಕು.
(ಎನ್.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ